Monday, September 8, 2008

ಕೆಮ್ಮಿನ ಕೊರೆತ

ಸುಮಾರು ಒಂದು ತಿಂಗಳಿಂದ ಸಖತ್ತಾಗಿ ಕಾಡಿಸುತ್ತಾ ಇದೆ ಈ ಕೆಮ್ಮು. ಹೋದಲ್ಲಿ, ಬಂದಲ್ಲಿ, ಕೂತಲ್ಲಿ, ನಿಂತಲ್ಲಿ, ಮಲಗಿದಲ್ಲಿ ಎಲ್ಲ ಕಡೆ ನನಗಿಂತ ಮೊದಲೇ ಹೋಗಿ, `ಖೊಕ್... ಖೊಕ್...' ಅಂತ ನನಗೆ ನಾನೇ ಬಹುಪರಾಕು ಹೇಳಿಕೊಳ್ತಾ ಇದ್ದೀನಿ ಅನ್ನೋ ಅನುಭವ ಕೊಡುತ್ತಿತ್ತು! ಹಾಗಂತ ಶೀತ, ನೆಗಡಿ, ಕಫ ಒಂದೂ ಇಲ್ಲ! ಬರೀ ಕೆಮ್ಮು. ಅಮ್ಮನ ಮೆಣಸಿನ ಕಾಳು ಕಷಾಯ, ಅರಸಿನ ಹಾಕಿದ ಹಾಲು, ಆಗಾಗ ತಿಂದ ಕಲ್ಲುಸಕ್ಕರೆ, ಜೇನುತುಪ್ಪ ಇದ್ಯಾವುದಕ್ಕೂ ಕೆಮ್ಮು ಜಗ್ಗದೇ ಹೋದಾಗ ಆಯುರ್ವೇದಕ್ಕೆ ಮೊರೆಹೋದೆ. ಡಾಕ್ಟರು ಥೇಟ್ `ಜೆಮ್ಸ್' ಚಾಕ್ಲೇಟ್ ಹಾಗಿರುವ ಮಾತ್ರೆಗಳನ್ನು ಮುಷ್ಟಿ ತುಂಬ ಕೊಟ್ಟು `ಬಹುಶಃ ಎಸಿ ಪ್ರಭಾವದಿಂದ ಬರ್ತಿರೋ ಕೆಮ್ಮು ಇದು. ಈ ಮಾತ್ರೆ ತಗೊಂಡು ನೋಡಿ' ಅಂದರು. `ಜೆಮ್ಸ್'ಗಳೆಲ್ಲ ಮುಗಿದುವಾದರೂ ಕೆಮ್ಮೇನೂ `ಜಪ್ಪಯ್ಯ' ಅನ್ನಲಿಲ್ಲ.

ಇಷ್ಟಾಗುವಾಗ ಕೆಮ್ಮಿ ಕೆಮ್ಮಿ ನನ್ನ ಸ್ವರ ಅಕ್ಷರಶಃ ಬಿದ್ದುಹೋಯಿತು! ಮಾತಾಡಹೋದರೆ ಪಾತಾಳದಾಳದಿಂದ ಸ್ವರ ಬರುತ್ತಿದೆಯೇನೋ ಅನಿಸುತ್ತಿತ್ತು. ಕಲೀಗೊಬ್ಬ `ಅರೇ! ಡಿಟ್ಟೋ ರಾಣಿ ಮುಖರ್ಜಿ ಥರಾ ಆಗಿದೆ ನಿನ್ನ ವಾಯಿಸ್' ಅಂತ ಕಾಲೆಳೆಯೋಕೆ ಶುರು ಮಾಡಿದ. ಅವನ ಹೋಲಿಕೆಗೆ ಖುಶಿಯಾಯಿತಾದರೂ, ಇನ್ನೊಬ್ಬಳು `ನೋಡು, ಸ್ವರ ಬಿದ್ದು ಹೋದಾಗಲೂ ತುಂಬ ಮಾತಾಡ್ತಾ ಇದ್ರೆ ಆ ವಾಯಿಸ್ಸೇ ಪರ್ಮನೆಂಟ್ ಆಗುತ್ತಂತೆ!' ಅಂತ ಹೆದರಿಸಿದಾಗ ಸ್ವಲ್ಪ ಸಮಯ ಮಾತಾಡದೇ ಸುಮ್ಮನಿರೋದಕ್ಕೆ ವ್ಯರ್ಥ ಪ್ರಯತ್ನ ಮಾಡಿ ಕೈಬಿಟ್ಟೆ.

ಇವಿಷ್ಟು ಸಾಲದು ಅಂತ ಸಿಕ್ಕಾಪಟ್ಟೆ ಕಿವಿ ನೋವು, ಕಣ್ಣುರಿ ಎಲ್ಲ ಪ್ರಾರಂಭವಾಯಿತು. ಏನೋ ಸೀರಿಯಸ್ ಪ್ರಾಬ್ಲೆಮ್ ಇರಬಹುದು ಅಂತ ಪುಕುಪುಕು ಶುರುವಾಗಿ ಕಿವಿ-ಮೂಗು-ಗಂಟಲು ತಜ್ಞರ ಹತ್ತಿರ ಕೇಳಿದರೆ ವಾಸಿಯೇನೋ ಅನಿಸಿ ಅವರ ಬಳಿ ಹೋದೆ. `ಮೂಗಿನದ್ದೇನೂ ಸಮಸ್ಯೆ ಇಲ್ಲ. ಕಿವಿ ಮತ್ತು ಗಂಟಲು ನೋವು' ಅಂತ ನಾನಂದರೆ ಅವರು ನನ್ನ ಮೂಗನ್ನೂ ಪರೀಕ್ಷಿಸಿ `ಏನಿದು ನಿಮ್ಮ ಮೂಗು ಹೀಗಿದೆ? ಮಧ್ಯದ ಗೋಡೆ ಎಡ ಬದಿ ಜಾಸ್ತಿ ವಾಲಿಕೊಂಡಿದೆ?' ಅಂದರು. ನಾನೇನನ್ನಲಿ? ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತ ಹೇಳಿ ಮರ್ಯಾದೆ ಕಳಕೊಳ್ಳೋದು ಯಾಕೆ ಸುಮ್ಮನೆ ಅಂತ ಅನಿಸಿದ್ದರಿಂದ ಏನೂ ಹೇಳದೆ ಸುಮ್ಮನೆ ಹಲ್ಕಿರಿದೆ. `ಮೂಗಿನಿಂದಲೇ ನಿಮಗೆ ಸಮಸ್ಯೆ ಆಗ್ತಿರೋದು. ಅಲ್ಲಿಂದ ವೆಂಟಿಲೇಷನ್ ಸರಿಯಾಗಿ ಆಗ್ತಿಲ್ಲ. ತೀರಾ ಪ್ರಾಬ್ಲೆಮ್ ಆದರೆ ಒಂದು ಸಣ್ಣ ಆಪರೇಶನ್ ಮಾಡೋಣ. ಸಧ್ಯಕ್ಕೆ ಈ ಮಾತ್ರೆ ತಗೊಳ್ಳಿ. ಮತ್ತೆ ಎಸಿ ಆದಷ್ಟು ಅವಾಯಿಡ್ ಮಾಡಿ' ಅಂದರು. ಎಸಿ ಅವಾಯಿಡ್ ಮಾಡುವ ದಾರಿ ನನಗ್ಯಾವುದೂ ತೋಚಲಿಲ್ಲ. ಆದರೆ ಮೂಗಿಗೆ `ಪ್ಲಾಸ್ಟಿಕ್ ಇಲ್ಲದ ಸರ್ಜರಿ' ಮಾಡಿಸಿಕೊಂಡು ನಾನೂ ಮೈಕೆಲ್ ಜಾಕ್ಸನ್, ಶ್ರೀದೇವಿ ಸಾಲಿಗೆ ಸೇರುವ ಕನಸು ಕಾಣುತ್ತಾ ಬಿಲ್ ತೆತ್ತು ಹೊರ ಬಂದೆ.

ಅವರ ಮಾತ್ರೆಗಳ ಪ್ರಭಾವ ನಿಮಗೆ ಹೇಳಲೇಬೇಕು. ತಗೊಳ್ತಾ ಇದ್ದಿದ್ದು ಬೆಳಿಗ್ಗೆ ಮತ್ತು ರಾತ್ರಿ ಕೇವಲ ಅರ್ಧ ಮಾತ್ರೆ ಮಾತ್ರ. ಏನು ಪರಿಣಾಮ ಬೀರಿತು ಅಂತೀರಿ? ಹಗಲಿನಲ್ಲೂ ಪೊಗದಸ್ತಾದ ನಿದ್ದೆ ತರಿಸಿತು! ಸಾಲದ್ದಕ್ಕೆ ನನ್ನ ಜೀರ್ಣಾಂಗವ್ಯೂಹವನ್ನೂ ಸಂಪೂರ್ಣವಾಗಿ ಹದಗೆಡಿಸಿತು!! ಮತ್ತೆ ಕೆಮ್ಮು?? ಅದು ಇದ್ಯಾವುದಕ್ಕೂ ಹೆದರದೆ, `ನೀನಂದ್ರೆ ನಂಗೆ ತುಂಬಾ ಇಷ್ಟ ಕಣೇ' ಅನ್ನುತ್ತ ನನ್ನ ಅಮರಪ್ರೇಮಿಯೇನೋ ಎಂಬಂತೆ ಗಟ್ಟಿಯಾಗಿ ಅಂಟಿಕೊಂಡು ಕುಳಿತುಬಿಟ್ಟಿತ್ತು.

ಅವತ್ತು ನಮ್ಮ ಟೀಮ್ ಲೀಡರ್ `ಏನ್ರೀ? ನೀವು ಒಳ್ಳೆ ಮಾಧುರಿ ದೀಕ್ಷಿತ್ ಥರ ಆಗಿಬಿಟಿದ್ದೀರಿ?!' ಅಂದಾಗ ಖುಷಿಯಿಂದ ತೀರಾ ಉಬ್ಬಿಹೋಗಿ `ಯಾಕೆ ಸರ್?' ಅಂತ ಕೇಳಿದೆ. `ಅಲ್ಲ ಮತ್ತೆ? `ಹಮ್ ಆಪ್ಕೆ ಹೇ ಕೌನ್' ನಲ್ಲಿ ಮಾಧುರಿ ನಿಮ್ಮ ಹಾಗೇ ಅಲ್ವಾ ಕೆಮ್ಮುತ್ತಾ ಇದ್ದಿದ್ದು?' ಅಂತ ಅವರಂದಾಗ ಪಿಚ್ಚೆನಿಸಿದರೂ ಈ ನೆವದಲ್ಲಾದರೂ ನಾನು ಮಾಧುರಿ ದೀಕ್ಷಿತ್ ಆದ್ನಲ್ಲಾ ಅಂತ ಖುಶಿಯೇ ಆಯಿತು. ನಾನೆಲ್ಲಿ? ಅವಳೆಲ್ಲಿ?!

ಈ ವೇಳೆಗೆ ನಾನು ಮತ್ತು ನನ್ನ ಕೆಮ್ಮು ಇಬ್ಬರೂ ಸಿಕ್ಕಾಪಟ್ಟೆ ಜನಪ್ರಿಯವಾಗಿಬಿಟ್ಟಿದ್ದೆವು. ತಲೆಗೊಂದೊಂದು ಉಪಾಯ ಸಿಗುತ್ತಿತ್ತು, ಕೆಮ್ಮು ದೂರ ಮಾಡೋಕೆ. ಅನುಸರಿಸೋಕೆ ಸಾಧ್ಯವಾಗಿದ್ದನ್ನೆಲ್ಲ ಅನುಸರಿಸಿದ್ದೂ ಆಯಿತು. ಕೆಮ್ಮು ಕ್ಯಾರೇ ಅನ್ನಲಿಲ್ಲ. ಎಸಿ ತೊಂದರೆಗಳಿಗೆ ರಾಮಬಾಣ ಅನಿಸಿಕೊಂಡ ಅದೆಂಥದೋ ಆಯುರ್ವೇದದ ಹುಡಿ ಮತ್ತು ಪಿಪ್ಪಲ್ಯಾಸವ ಕಷಾಯ ತಕ್ಕ ಮಟ್ಟಿಗೆ ಕೆಮ್ಮು ನೀಗುತ್ತಿತ್ತು. ಆದರೆ ಅದರ ಪ್ರಭಾವ ಇರುತ್ತಿದ್ದುದು ಸ್ವಲ್ಪ ಸಮಯ ಮಾತ್ರ. ಕೆಮ್ಮು ಸ್ವಲ್ಪ ಹೊತ್ತು ರೆಸ್ಟ್ ತೆಗೆದುಕೊಂಡಂತೆ ಮಾಡಿ ಮತ್ತೆ ಪುನಃ `ನಿನ್ನ ತುಂಬ ಮಿಸ್ ಮಾಡಿಕೊಂಡೆ ಕಣೇ' ಎಂಬಂತೆ ನನಗೆ ಜೋತುಬೀಳುತ್ತಿತ್ತು.

ನಾನು ಹೋದಲ್ಲೆಲ್ಲ ಕೆಮ್ಮು ನನಗೆ ವಿಐಪಿ ಟ್ರೀಟ್‌ಮೆಂಟ್ ಕೊಡಿಸುತ್ತಿತ್ತಾದರೂ ನನ್ನ ಪಾಡಿಗೆ ನಾನು ಗುನುಗಿಕೊಳ್ಳಲಾಗದಂತೆ, ಸರಿಯಾಗಿ ಮಾತಾಡಲೂ ಆಗದಂತೆ ಮಾಡಿ ಸ್ವಾನುಕಂಪಕ್ಕೆ ದೂಡಿಬಿಟ್ಟಿತು. ತೆಪ್ಪಗೆ ಕುಳಿತು, ಕಷ್ಟ ಪಟ್ಟು `ಕಣ್ಣನು ಮುಚ್ಚಬಹುದು ಚಂದಮಾಮ? ಕನಸನು ಬಚ್ಚಿಡಬಹುದೆ ಚಂದಮಾಮ...' ಅಂತ ಪಾತಾಳದಾಳದಿಂದ ಬರುವ ಸ್ವರದಲ್ಲಿ ಗೊಣಗುತ್ತಿರಬೇಕಾದರೆ ಹಾಡಿನೊಂದಿಗೇ ನಾಗಾಭರಣರ `ನೀಲಾ' ನೆನಪಾದಳು. ಮಾತು ಬಾರದ (ಎಲ್ಲರಿಂದ ಪಾತಿ ಅಂತ ಕರೆಸಿಕೊಳ್ಳಲ್ಪಡುವ) ಪಾರ್ವತಿ ದೊಡ್ಡಮ್ಮನೂ ನೆನಪಾದರು. ಅವರಂತವರೆಲ್ಲ ತಮ್ಮ ಅಸಹಾಯಕತೆಯನ್ನು ಮೆಟ್ಟಿ ನಿಂತಿರುವಾಗ ನಾನೊಂದು ಯಕಶ್ಚಿತ್ ಕೆಮ್ಮಿಗೆ ಹೆದರುವುದೇ ಅಂತ ನಾಚಿಕೆಯಾಗಿ `ಛೀ ತೊಲಗಾಚೆ' ಅಂದೆ. ಅಷ್ಟಂದಿದ್ದೇ ಕೆಮ್ಮಿಗೆ ಸಿಕ್ಕಾಪಟ್ಟೆ ಅವಮಾನವಾಗಿ ಹೊರಡುವ ಸನ್ನಾಹದಲ್ಲಿದೆ! ಈಗೀಗ ತೀರಾ ನನ್ನ ನೆನಪಾದಾಗ ಮಾತ್ರ ಬರುತ್ತದಷ್ಟೇ!

ಇಷ್ಟು ಸಾಹಸ ಪಟ್ಟು (!?) ಕೆಮ್ಮನ್ನು ಓಡಿಸಿ ನನ್ನ ಸ್ವರ ಹುಡುಕಿಕೊಂಡೆನಲ್ಲ ಅಂತ ಖುಷಿಯೇನೋ ಇದೆ ತುಂಬಾ. ಒಂದೇ ಒಂದು ಬೇಜಾರು ಅಂದರೆ ಈಗ ಯಾರೂ ನನ್ನ ಮಾಧುರಿ ದೀಕ್ಷಿತ್‌ಗೆ, ರಾಣಿ ಮುಖರ್ಜಿಗೆ ಹೋಲಿಸುತ್ತಿಲ್ಲವಲ್ಲಾ ಅಂತ :-)

7 comments:

Jagali bhaagavata said...

ಮಾಧುರಿ ದೀಕ್ಷಿತ್, ರಾಣಿ ಮುಖರ್ಜಿ ಎಲ್ಲ ಈಗ ಆಂಟಿಯರಾಗಿದಾರಲ್ವ? :-)

sunaath said...

ಕೆಮ್ಮಿನ ಬಗೆಗೆ ನೀವು ಇಷ್ಟು ಚೆನ್ನಾಗಿ ಬರೆದಿದ್ದೀರಾ ಅಂದ್ರೆ, ನನಗೂ ಕೆಮ್ಮು ಬರಬಾರದೇ ಅನ್ನಸ್ತಾ ಇದೆ.

Unknown said...

ಕೆಮ್ಮಿದವರಿಗೆ ಗೊತ್ತು ಅದರ ಕಷ್ಟ! ಆದರೂ ಕೆಮ್ಮಿನ ನೆಪದಲ್ಲಿ ಕಾಂಪ್ಲಿಮೆಂಟು ಸಿಕ್ಕಿತಲ್ಲ ಬಿಡಿ.

-ಜಿತೇಂದ್ರ

Jagali bhaagavata said...

http://www.kannadaprabha.com/News.asp?ID=KP420080913031551

Arvind said...

Congrats.. lekhana Kannada prabha dalli banthalla

jomon varghese said...

ವ್ಹಾ.. ಚೆಂದದ ಲೇಖನ.. ಒಳ್ಳೆಯ ನಿರೂಪಣೆ. ಕೆಮ್ಮುತ್ತಲಿರಿ...

Shubhada said...

ಎಲ್ಲರಿಗೂ ತುಂಬ ಥ್ಯಾಂಕ್ಸು :-)