Tuesday, June 11, 2013

ರಂಜನಿಯಿಂದ ಮಧ್ಯಮಾವತಿ


ಪಾರಿಜಾತ ಹೂವಿನ ಬಗೆಗೆ ನನಗೆ ಅಂಥಾ ಪ್ರೀತಿ ಹುಟ್ಟೋಕೆ ಕಾರಣಳಾಗಿದ್ದೇ ಅವಳು.



"ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ... " ಅಂತ ಅವಳು ಸುಶ್ರಾವ್ಯವಾಗಿ ಹಾಡುವಾಗ ಪಾರಿಜಾತವೂ ಕೂಡ ತನ್ನ ಬಗ್ಗೆ ಹೆಮ್ಮೆ ಪಟ್ಟಿರಬಹುದೇನೋ.



ಮೊದಲ ಬಾರಿಗೆ ಆ ಹಾಡನ್ನೂ, ಅವಳ ಕಂಠವನ್ನೂ ಆಲಿಸುತ್ತಿದ್ದೆ. ಆ ಹಾಡು, ಅದರ ರಾಗ, ೧೫ನೇ ವಯಸ್ಸಿಗೇ ಸತತ ಸಾಧನೆಯಿಂದ ಮಾಗಿದ ಅವಳ ಸ್ವರ - ಈ ಎಲ್ಲವೂ ಹಾಡಿನಲ್ಲಿ ಹೇಳಿದ್ದಂತೆಯೇ ಮೃದುಭಾಷಿಯಾಗಿದ್ದ ಅವಳಿಗೆ ನನ್ನ ಮನಸಲ್ಲಿ ವಿಶೇಷ ಸ್ಥಾನ ಕಲ್ಪಿಸಿಕೊಡಲು ಯಶಸ್ವಿಯಾಗಿದ್ದವು ಮೊದಲ ಬಾರಿಗೇ.



"ನಾವು ಆಡುವ ಮಾತು ಹೀಗಿರಲಿ ಗೆಳೆಯಾ..." ಈ ಸಾಲನ್ನಂತೂ ಅವಳದೆಷ್ಟು ಸುಮಧುರವಾಗಿ ಹಾಡಿದ್ದಳೆಂದರೆ ಅವಳ ಕಂಠದಿಂದ ಈ ಹಾಡು ಕೇಳಿ ಸುಮಾರು ೧೫ ವರ್ಷಗಳೇ ಕಳೆದಿದ್ದರೂ ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುವಂತಿದೆ..



ಹೀಗೆ ನನ್ನ ಬ್ಲಾಗ್^ನ ಶೀರ್ಷಿಕೆಗೆ, ಅಡಿಶೀರ್ಷಿಕೆಗೆ ಕಾರಣಳಾದ ನನ್ನ ಪ್ರಿಯ ಗೆಳತಿ, ಮಧುರ ಕಂಠದ ಪ್ರಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ರಂಜನಿ ಹೆಬ್ಬಾರ್ (ರಂಜನಿ ಗುರುಪ್ರಸಾದ್) ಇನ್ನಿಲ್ಲವಾಗಿದ್ದಾಳೆ ಎಂಬ ಕಟು ಸತ್ಯವನ್ನು ಇನ್ನೂ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಅವಳನ್ನು ನನ್ನ ಆಪ್ತ ಸ್ನೇಹಿತೆ ಅನ್ನುವುದಕ್ಕಿಂತಲೂ ತನ್ನ ಅಪ್ರತಿಮ ಪ್ರತಿಭೆ, ನಿರಂತರ ಪ್ರಯತ್ನ ಮತ್ತು ಸದ್ಗುಣಗಳಿಂದ ನನ್ನನ್ನು ತುಂಬ ಪ್ರಭಾವಿಸಿದ ಸ್ನೇಹಿತೆ ಅನ್ನುವುದು ಹೆಚ್ಚು ಸೂಕ್ತ.



ತನ್ನ ತಂದೆ ತಾಯಿಯರ ನಿರಂತರ ಪ್ರೋತ್ಸಾಹ, ಖ್ಯಾತ ಗುರುಗಳ ಮಾರ್ಗದರ್ಶನ, ಅವಿರತ ಪರಿಶ್ರಮ ಅವಳನ್ನು ಚಿಕ್ಕ ವಯಸ್ಸಿಗೇ ದೊಡ್ಡ ಸಾಧಕಿಯನ್ನಾಗಿಸಿದ್ದವು. ಮದ್ರಾಸು ವಿವಿಯಲ್ಲಿ ಸಂಗೀತ ಎಂ.ಎ. ಮಾಡಿದ್ದರಿಂದಲೋ ಏನೋ, ಕರ್ನಾಟಕಕ್ಕಿಂತಲೂ ಚೆನ್ನೈಯಲ್ಲಿ ಮನೆಮಾತಾಗಿದ್ದಳು. ಆಕಾಶವಾಣಿಯ 'ಎ' ಗ್ರೇಡ್ ಕಲಾವಿದೆ. ಇಷ್ಟಿದ್ದರೂ ಅಹಂಕಾರ ನೆತ್ತಿಗೇರಿರಲಿಲ್ಲ. ದಶಕದ ಹಿಂದೆ, ಅದಾಗಲೇ ಅವಳ ಮುಂದೆ ತೃಣದಂತಿದ್ದ ನನ್ನ ಹಾಡನ್ನು ಮೆಚ್ಚಿ ಒಳ್ಳೆಯ ಮಾತಾಡಿದ್ದವಳು, ಮೊನ್ನೆ ಮೊನ್ನೆ ಅವಳದ್ದೇ ಕಛೇರಿ ಮುಗಿದ ಮೇಲೆ ಸಿಕ್ಕಿದ್ದಾಗಲೂ ಅದೇ ಹಳೆಯ ವಿಶ್ವಾಸದಿಂದ ಮಾತಾಡಿಸಿದ್ದಳು, "ಎಷ್ಟು ಚೆನ್ನಾಗಿ ಹಾಡುತ್ತೀಯೇ ಮಾರಾಯ್ತಿ!" ಎನ್ನುವ ನನ್ನ ಹೊಗಳಿಕೆಗೆ ಕಿವಿಗೊಡದೆ ನನ್ನ ಸಂಗೀತದ ಬಗೆಗೆ ವಿಚಾರಿಸಿದ್ದಳು. ತುಂಬಿದ ಕೊಡ ತುಳುಕುವುದಿಲ್ಲ ಅಂತ ಸುಮ್ಮನೆ ಅನ್ನುತ್ತಾರೆಯೇ?



ಇಂತಿದ್ದ ರಂಜನಿ ನಿನ್ನೆ ಮಧ್ಯಮಾವತಿ ಹಾಡಿ ತನ್ನ ಇಹಲೋಕದ ಕಛೇರಿ ಮುಗಿಸಿ ನಾದಲೋಕದಲ್ಲೇ ಲೀನಳಾಗಿ ಬಿಟ್ಟಿದ್ದಾಳೆ. ಪ್ರಾಯಶಃ ದೇವರಿಗೂ ಅವಳ ಹಾಡು ಪ್ರಿಯವಾಗಿರಬಹುದೇನೋ.



ಈಚೀಚೆಗೆ ಪ್ರಣವ ಮಾತ್ರ (ಆಟವಾಡಲಿಕ್ಕೆಂದು) ಅಪಶ್ರುತಿಯಲ್ಲಿ ಪಲುಕುವ ಧೂಳು ಹಿಡಿದ ನನ್ನ ತಂಬೂರಿ ಎಂದೂ ಇಲ್ಲದ್ದು, ನಿನ್ನೆ ಗಾಳಿ ಬಂದ ನೆಪದಲ್ಲಿ, ಕಿಟಕಿ ಪರದೆ ತಾಗಿಸಿಕೊಂಡು ಸರಿಯಾದ ಶ್ರುತಿಯಲ್ಲಿ ಝೇಂಕರಿಸಿದ್ದು ಆಕಸ್ಮಿಕವಲ್ಲದಿರಬಹುದು. ಜನ್ಮತಃ ತಂಬೂರಿಯೊಂದಿಗೇ ನಂಟು ಬೆಸೆದುಕೊಂಡಂತಿದ್ದ ಆ ನಾದಸರಸ್ವತಿ ರಂಜನಿಗೆ ವಿದಾಯ ಕೋರಲು ಇರಬಹುದು ಅನಿಸಿತು ನನಗೆ.



ಯಶಸ್ಸಿನ ಶಿಖರವೇರಿದ್ದ, ಇನ್ನದೆಷ್ಟೋ ಎತ್ತರಕ್ಕೆ ಏರಬಹುದಾಗಿದ್ದ ತಮ್ಮ ಪ್ರತಿಭಾವಂತ ಮಗಳ ಅಕಾಲಿಕ ಮರಣದ ನೋವನ್ನು ಭರಿಸುವ ಶಕ್ತಿಯನ್ನು ಹೆಬ್ಬಾರ್ ಸರ್ ದಂಪತಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತ, ಅಗಲಿದ ಗೆಳತಿಗೆ ಕಂಬನಿಗಳೊಂದಿಗೆ ವಿದಾಯ.